Actor and BJP leader Jaggesh clarification on mimicry about H.D. Deve Gowda. Actor Jaggesh apologizes to H D Devegowda.
ದೇವೇಗೌಡರ ಬಗ್ಗೆ ಮಿಮಿಕ್ರಿ : ಸ್ಪಷ್ಟನೆ ಕೊಟ್ಟ ನಟ ಜಗ್ಗೇಶ್. 'ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಕುಮಾರಣ್ಣ ನನ್ನ ನಿರ್ಮಾಪಕರು. ದೇವೇಗೌಡರ ಬಗ್ಗೆ ನಾನು ಯಾವುದೇ ಕೆಟ್ಟ ಮಾತು ಆಡಿಲ್ಲ' ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಅಂಗವಾಗಿ ಶುಕ್ರವಾರ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಬಿಜೆಪಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಗ್ಗೇಶ್ ಅವರು ದೇವೇಗೌಡರ ಮಾತಿನ ಶೈಲಿಯನ್ನು ಮಿಮಿಕ್ರಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.ಶುಕ್ರವಾರ ಸಂಜೆ ನೆಲಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಎಚ್.ಡಿ.ದೇವೇಗೌಡರು, 'ಜಗ್ಗೇಶ್ ದೊಡ್ಡವರು ಜೊತೆಗೆ ಚಿತ್ರ ನಟರು. ಅವರ ಬಗ್ಗೆ ನಾನು ಮಾತನಾಡಲು ಸಾಧ್ಯನಾ?' ಎಂದು ಪ್ರತಿಕ್ರಿಯೆ ಕೊಟ್ಟಿದ್ದರು.ಸೋಮವಾರ ವಿಧಾನಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ.ಶರವಣ ಅವರಿಗೆ ವಾಟ್ಸಪ್ ಸಂದೇಶ ಕಳಿಸಿರುವ ಜಗ್ಗೇಶ್ ಅವರು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. '1990ರಿಂದ ನಾನು ದೇವೇಗೌಡರ ಅಭಿಮಾನಿ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ' ಎಂದು ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.