ಇದಕ್ಕೆ ಅದೃಷ್ಟ ಎನ್ನಬೇಕೋ ಅಥವಾ ಪ್ರಜ್ಞೆಯಿಂದ ಆಟ ಆಡುತ್ತಿರುವುದರ ಪ್ರತಿಫಲವೋ ಗೊತ್ತಿಲ್ಲ. ಒಟ್ನಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸತತ ಐದು ವಾರ ನಾಮಿನೇಟ್ ಆಗದೆ ಫುಲ್ ಸೇಫ್ ಆಗಿರುವ ಏಕೈಕ ಸ್ಪರ್ಧಿ ಅಂದ್ರೆ ಅದು ಚಂದನ್ ಶೆಟ್ಟಿ.! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಇತಿಹಾಸದಲ್ಲಿ ಇಲ್ಲಿಯವರೆಗೂ ಒಮ್ಮೆ ಕೂಡ ಚಂದನ್ ಶೆಟ್ಟಿ ನಾಮಿನೇಟ್ ಆಗಿಲ್ಲ. ನಾಲ್ಕು ವಾರಗಳ ಕಾಲ ಇಮ್ಯೂನಿಟಿ ಪಡೆಯದೆ, ಯಾರಿಂದಲೂ ನಾಮಿನೇಟ್ ಆಗದ ಚಂದನ್ ಶೆಟ್ಟಿ, ಐದನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ನಾಮಿನೇಷನ್ ನಿಂದ ಹೊರಗುಳಿದಿದ್ದಾರೆ.ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆಯಲ್ಲಿ ವಿಜೇತರಾಗಿ ಈ ವಾರದ ಕ್ಯಾಪ್ಟನ್ ಆದರು ಚಂದನ್ ಶೆಟ್ಟಿ.ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ವಿಶೇಷ ಚಟುವಟಿಕೆಯೊಂದನ್ನ ನೀಡಿದ್ದರು. ಇದರ ಅನುಸಾರ, ಗಾರ್ಡನ್ ಏರಿಯಾದಲ್ಲಿ ಹಾಕಲಾಗಿದ್ದ ವೃತ್ತಾಕಾರದ ಗುರುತಿನ ಮೇಲೆ ಕುಳಿತುಕೊಂಡು, ಪ್ರತಿ ಬಾರಿ ಹಾಡು ಆರಂಭವಾದ ಕೂಡಲೆ, ನೀಡಲಾಗಿರುವ ಪುಟ್ಟ ಪೆಟ್ಟಿಗೆಯನ್ನು ಸದಸ್ಯರು ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸಬೇಕಿತ್ತು. ಹಾಡು ನಿಂತ ತಕ್ಷಣ ಹಸ್ತಾಂತರ ಮಾಡುವುದನ್ನು ನಿಲ್ಲಿಸಬೇಕಿತ್ತು. ಹಾಡು ನಿಂತ ತಕ್ಷಣ, ಪೆಟ್ಟಿಗೆ ಯಾವ ಸದಸ್ಯರ ಕೈಯಲ್ಲಿ ಇರುತ್ತದೆಯೋ, ಆ ಸದಸ್ಯರು ಈ ಚಟುವಟಿಕೆಯಿಂದ ಹೊರಬರಬೇಕಿತ್ತು.