ಕನ್ನಡ ಸಾಹಿತ್ಯ, ಅದರ ಬಗ್ಗೆ ಮಾತನಾಡುವುದು, ಹಳೆ ಹೊಸ ಸಾಹಿತ್ಯಗಳನ್ನು ಮೊಗೆಮೊಗೆದು ಕುಡಿಯುವುದು ಒಂದು ಸಂಭ್ರಮವಾದರೆ, ಅತ್ಯಂತ ಶ್ರೀಮಂತವಾಗಿರುವ ಕನ್ನಡ ಸಾಹಿತ್ಯದ ಬಗ್ಗೆ ಪತ್ರಕರ್ತ, ಸಾಹಿತಿ ಗಿರೀಶ್ (ಜೋಗಿ) ಅವರೊಡನೆ ಹರಟೆ ಹೊಡೆಯುವುದು ಮತ್ತೊಂದು ರೀತಿಯ ಸಂಭ್ರಮ.
ಕರ್ನಾಟಕದಲ್ಲಿ ಕನ್ನಡ ಸಾಹಿತ್ಯಕ್ಕೇನೂ ಬರವಿಲ್ಲ, ಆದರೆ ಅಭಿರುಚಿ ಬೆಳೆಸುವಂಥ ಸಾಹಿತ್ಯ ಕನ್ನಡಿಗರಿಗೆ ಸಿಗುತ್ತಿಲ್ಲ ಮತ್ತು ಅದನ್ನು ಇಂದಿನ ಪೀಳಿಗೆಗೆ ತಲುಪಿಸುವ, ಅವರಲ್ಲಿ ಅಭಿರುಚಿ ಬೆಳೆಸುವ ಕೆಲಸ ನಮ್ಮ ಸಾಹಿತಿಗಳಿಂದ, ಕನ್ನಡ ಮೇಷ್ಟ್ರುಗಳಿಂದ ಆಗುತ್ತಿಲ್ಲ ಎನ್ನುವ ಕೊರಗು ಕನ್ನಡಿಗರದ್ದು.
ಈ ದೃಷ್ಟಿಯಿಂದ ನೋಡಿದರೆ, ಧಾರವಾಡದಲ್ಲಿ ಪ್ರತಿವರ್ಷ ನಡೆಯುವ, ಯಾವುದೇ ಸ್ವಾಗತ, ವಂದನಾರ್ಪಣೆ, ಒಣಭಾಷಣಗಳು ಇಲ್ಲದ ಸಾಹಿತ್ಯ ಸಂಭ್ರಮ ನಿಜಕ್ಕೂ ಪ್ರಸ್ತುತವಾಗುತ್ತದೆ. ಅಲ್ಲಿ ಸಾಹಿತ್ಯ ನಿಜಕ್ಕೂ ಸಂಭ್ರಮಿಸುತ್ತದೆ, ಸಾಹಿತ್ಯವನ್ನು ಪ್ರೀತಿಸುವವರು ಅಲ್ಲಿ ನೆರೆದಿರುತ್ತಾರೆ. ಇಂಥ ಸಂಭ್ರಮಗಳು ಸಾಯಬಾರದು...
ಹೀಗೆಂದು ಮಾರ್ಮಿಕವಾಗಿ ಮಾತನಾಡುತ್ತ, ಸಾಹಿತ್ಯದ ಬಗ್ಗೆ ಅತ್ಯಂತ ಸ್ವಾರಸ್ಯಕರವಾಗಿ, ಸುಮಾರು ಮೂವತ್ತು ನಿಮಿಷಗಳ ಕಾಲ ಎಸ್ ಕೆ ಶಾಮಸುಂದರ ಅವರೊಂದಿಗೆ ಹರಟೆ ಹೊಡೆದರು ಜೋಗಿ ಅವರು. ಅವರು ಮಾತುಗಳು ಅಡಿಗರ ಕವನ, ಪೂರ್ಣಚಂದ್ರ ತೇಜಸ್ವಿಯವರ ಜೀವಂತಿಕೆಯಿಂದ ತುಂಬಿರುವ ಕಾದಂಬರಿ ಸುತ್ತ ಸುತ್ತಾಡಿದವು.
ಜೋಗಿ ಮತ್ತು ಶಾಮ್ ಅವರು ಆಡಿರುವ ಮಾತುಗಳನ್ನೆಲ್ಲ ಇಲ್ಲಿ ಬರೆದರೆ, ಆ ಸಾಹಿತ್ಯ ಸಲ್ಲಾಪದ ಸ್ವಾರಸ್ಯವೇ ಹೊರಟುಹೋಗುತ್ತದೆ. ಆದ್ದರಿಂದ ಚರ್ಚೆ ಯಾವ್ಯಾವುದರತ್ತ ಹೊರಳಿತು, ಇನ್ನೂ ಏನೇನು ಮಾತುಗಳು ಬಂದವು ಎಂಬುದನ್ನು ಈ ವಿಡಿಯೋ ನೋಡಿಯೇ ನೀವು ತಿಳಿದುಕೊಳ್ಳಬೇಕು. ಹಾಗೆಯೆ, ನಿಮ್ಮ ಅಭಿಪ್ರಾಯ ಮಂಡಿಸುವುದನ್ನು ಮಾತ್ರ ಮರೆಯಬೇಡಿ.