ಮೈಸೂರು ಅರಮನೆಯು ಅತಿ ಪ್ರಸಿದ್ಧಿಯನ್ನು ಹೊಂದಿದ್ದು, ಮೈಸೂರು ನಗರಕ್ಕೆ ಭೇಟಿ ಕೊಡುವ ಎಲ್ಲ ಪ್ರವಾಸಿಗರಲ್ಲೂ ಅತ್ಯಂತ ಸೂಚಿತ ಸ್ಥಳವಾಗಿದೆ. ದಸರಾ ಬಂತೆಂದರೆ ಮೈಸೂರು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತದೆ. ಮೈಸೂರು ಅರಮನೆ ಬಗ್ಗೆ ಹೇಳುವುದಾದರೆ ಅದಕ್ಕೆ ತನ್ನದೇ ಇತಿಹಾಸವಿದೆ. ಜೊತೆಗೆ ಸೌಂದರ್ಯದಿಂದ ವಿಶ್ವವಿಖ್ಯಾತಿಯನ್ನು ಪಡೆದಿದೆ. 1939ರಲ್ಲಿ ಅರಮನೆಯ ಮುಂದೆ ಇದ್ದಂತಹ ಪೋರ್ಟಿಕೋವನ್ನು ತೆರವುಗೊಳಿಸಿ ಅಲ್ಲಿಂದ ನೇರವಾಗಿ ದರ್ಬಾರ್ ಹಾಲ್ ಕಾಣುವಂತೆ ಮಾಡಲಾಯಿತು. ಅರಮನೆಯ ಮುಂಭಾಗದಲ್ಲಿರುವ ಉದ್ಯಾನವನ ಸುಂದರವಾಗಿದ್ದು ಅರಮನೆಗೆ ಶೋಭೆ ತಂದಿದೆ. ಅರಮನೆಯನ್ನು ಸುಮಾರು 97 ಸಾವಿರ ವಿದ್ಯುತ್ ಬಲ್ಬ್ ಗಳಿಂದ ಅಲಂಕರಿಸಲಾಗಿದೆ. ರಾತ್ರಿ ವೇಳೆ ಝಗಮಗಿಸುವ ಅರಮನೆ ಕಣ್ಣಿಗೆ ಹಬ್ಬ.