ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಹಂತ ಮುಂದುವರೆಯುತ್ತಿದ್ದಂತೆಯೇ ಹೃದಯದ ಬಡಿತವೂ ಸೂಕ್ತ ಉಪಕರಣದ ನೆರವಿನಿಂದ ಸ್ಪಷ್ಟವಾಗಿ ಕೇಳಿಬರುತ್ತದೆ. ಅಲ್ಟ್ರಾ ಸೌಂಡ್ ಉಪಕರಣದಿಂದ ಕೇಳಿಬರುವ ಮಗುವಿನ ಹೃದಯದ ಬಡಿತ ಇದು ಯಾವ ಮಗು ಎಂಬುದನ್ನು ತಿಳಿಸುತ್ತದೆ ಎಂದು ಕೆಲವು ವ್ಯಕ್ತಿಗಳು ನಂಬುತ್ತಾರೆ. ಆದರೆ ಈ ಬಗ್ಗೆ ನಡೆದ ಸಂಶೋಧನೆಗಳು ಹಾಗೂ ಅಧ್ಯಯನಗಳು ಇದು ಸುಳ್ಳು, ಹೃದಯದ ಬಡಿತವನ್ನು ಆಲಿಸುವ ಮೂಲಕ ಲಿಂಗ ಪತ್ತೆ ಸಾಧ್ಯವಿಲ್ಲ ಎಂದು ಖಚಿತಪಡಿಸಿವೆ. ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ ಇಂದು ನಿನ್ನೆಯದ್ದಲ್ಲ. ಪ್ರಾಯಶಃ ಮಾನವರ ಉಗಮದ ದಿನದಿಂದಲೇ ಈ ಕುತೂಹಲ ಇದ್ದಿರಬಹುದು. ಆದರೆ ತಾಯಿಯ ದೈಹಿಕ ಲಕ್ಷಣಗಳನ್ನು ಸೂಕ್ಷ್ಮವಾಗಿ ಪರಿಗಣಿಸುವ ಅನುಭವಿ ದಾದಿಯರು ಹುಟ್ಟಲಿರುವ ಮಗು ಯಾವುದಿರಬಹುದೆಂದು ಸ್ಥೂಲವಾಗಿ ಹೇಳಬಲ್ಲವರಾಗಿರುತ್ತಾರೆ.