ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವಂತೆ ಕಾಣುತ್ತಿದೆ. ಇಲ್ಲಿ ಇತ್ತೀಚಿನ ದಿನಗಳಲ್ಲಿ ಗಲಭೆಗಳು ಕಾಮನ್ ಆಗಿಬಿಟ್ಟಿವೆ. ಆರು ತಿಂಗಳ ಹಿಂದೆ ಹರ್ಷ ಕೊಲೆ ನಂತರ ಪದೇ ಪದೇ ಕೋಮು ಗಲಭೆಗಳು ನಡೆಯುತ್ತಲೇ ಇವೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಹಾಕಲಾಗಿದ್ದ ಸಾವರ್ಕರ್ ಮತ್ತು ಟಿಪ್ಪು ಫ್ಲೆಕ್ಸ್ ವಿಚಾರದಲ್ಲಿ ಶುರುವಾಗಿದ್ದ ಗಲಾಟೆ ಇವತ್ತು ಕೂಡ ಮುಂದುವರೆದಿದೆ. ನಿಷೇಧಾಜ್ಞೆ ನಡುವೆಯೂ ಭದ್ರಾವತಿಯಲ್ಲಿ ಭಜರಂಗ ದಳ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ. ಇಂದು ಬೆಳಗ್ಗೆ ಇಲ್ಲಿನ ನೆಹರೂ ಬಡಾವಣೆಯಲ್ಲಿ ಗಲಾಟೆ ನಡೆದು ಸುನೀಲ್ ಎಂಬಾತನ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದು, ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಆದ್ರೆ ಚಾಕು ಇರಿತದಿಂದ ಸುನೀಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಡಿಚ್ಚಿ ಆಲಿಯಾಸ್ ಮುಬಾರಕ್ ಸೇರಿ ಮೂವರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಕಳೆದ ವಾರವಷ್ಟೇ ಜೈಲಿಂದ ರಿಲೀಸ್ ಆಗಿದ್ದ ಡ್ರಗ್ ಪೆಡ್ಲರ್ ಮುಬಾರಕ್ ನಿನ್ನೆ ಶರವಣನ್ ಎಂಬ ವಿಕಲಚೇತನನ ಮೇಲೆ ಹಲ್ಲೆ ನಡೆಸಿದ್ದ. ಇದನ್ನು ಸುನೀಲ್ ಪ್ರಶ್ನೆ ಮಾಡಿದ್ದ ಎನ್ನಲಾಗಿದೆ. ಇದೇ ಸಿಟ್ಟಿನಲ್ಲಿ ಮುಬಾರಕ್ ಬೆಂಬಲಿಗರ ಜೊತೆಗೂಡಿ ಬಂದು ಇಂದು ದಾಳಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮುಬಾರಕ್‍ನನ್ನು ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಭದ್ರಾವತಿಯಲ್ಲಿ ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣ ಆಗಿದೆ. ಮುಬಾರಕ್ ವಿರುದ್ದ ಕ್ರಮ ಕೈಗೊಳ್ಳುವಂತೆ ಹಿಂದು ಮುಖಂಡರು ಆಗ್ರಹಿಸಿದ್ದಾರೆ. ಭದ್ರಾವತಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಮುಂದುವರೆಸಲಾಗಿದೆ.
#publictv #hrranganath #bigbulletin