ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಹರಿಹರೇಶ್ವರ ಕಡಲ ತೀರದಲ್ಲಿ ಎಕೆ 47 ರೈಫಲ್ಸ್ ಮತ್ತು ಸ್ಫೋಟಕಗಳಿರುವ ಬೋಟ್ ಪತ್ತೆಯಾಗಿ ಕಳವಳಕ್ಕೆ ಕಾರಣವಾಗಿದೆ. ಇಂದು ಹರಿಹರೇಶ್ವರ ಸಮುದ್ರ ದಡದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಆಸ್ಟ್ರೇಲಿಯಾದ ಬೋಟ್ ಗಮನಿಸಿದ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡ್ಲೇ ಕಾರ್ಯಚರಣೆ ನಡೆಸಿದ ಪೊಲೀಸರು, ಮನುಷ್ಯರು ಇಲ್ಲದ ಲೇಡಿ ಹಾನ್ ಹೆಸೆರಿನ ಬೋಟ್ ಜಪ್ತಿ ಮಾಡಿದ್ದಾರೆ. ಅದರಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಇದು ಆಸ್ಟ್ರೇಲಿಯಾದ ಹಾನಾ ಲ್ಯಾಂಡರ್‍ಗನ್ ಎಂಬ ಮಹಿಳೆ ಹೆಸರಲ್ಲಿದೆ. ಈಕೆಯ ಪತಿ ಜೇಮ್ಸ್ ಹಾರ್ಬರ್ಟ್ ಇದರ ಕ್ಯಾಪ್ಟನ್ ಆಗಿದ್ದ. ಜೂನ್ 26ರಂದು ಮಸ್ಕಟ್‍ನಿಂದ ಯುರೋಪ್‍ಗೆ ಹೊರಟಿತ್ತು. ಆದ್ರೆ, ಇದ್ರ ಎಂಜಿನ್‍ನಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಜೂನ್ ಅಂತ್ಯದಲ್ಲಿ ಈ ಬೋಟ್‍ನಲ್ಲಿದ್ದ ವ್ಯಕ್ತಿಗಳನ್ನು ಓಮನ್ ಕಡಲಿನಲ್ಲಿ ರಕ್ಷಿಸಲಾಗಿತ್ತು.. ಆದ್ರೆ ಬೋಟ್ ಹೊರಗೆಳೆಯಲು ಆಗಿರಲಿಲ್ಲ. ಪರಿಣಾಮ ಬೋಟ್ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಈ ತೀರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಆದ್ರೆ, ಇದ್ರಲ್ಲಿ ಅಪಾರ ಶಸ್ತ್ರಾಸ್ತ್ರ ಹೇಗೆ ಬಂತು.. ಇದನ್ನು ಉಗ್ರರು ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ದುರುಪಯೋಗಪಡಿಸಿಕೊಂಡ್ರಾ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಸ್ಥಳಕ್ಕೆ ಭಯೋತ್ಪಾದಕ ನಿಗ್ರಹ ದಳ ಹಾಗೂ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮುಂಬೈ ಪುಣೆ ಸೇರಿ ಎಲ್ಲೆಡೆ ಹೈಅಲರ್ಟ್ ಘೋಷಿಸಲಾಗಿದೆ. ಡಿಸಿಎಂ ದೇವೇಂದ್ರ ಫಡ್ನಾವೀಸ್ ಮಾತನಾಡಿ, ಈವರೆಗೂ ಭಯೋತ್ಪಾದಕ ಸಂಚಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
#publictv #hrranganath #bigbulletin