ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ 46 ಹಳ್ಳಿಗಳ ಸೇರ್ಪಡೆ: ಹುಡಾ ಅಧ್ಯಕ್ಷ ಶಾಕೀರ್ ಸನದಿ

ETVBHARAT 2025-09-23

Views 401

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಈ ಹಿಂದೆ ಇದ್ದ 46 ಹಳ್ಳಿಗಳ ಜೊತೆಗೆ ಹೊಸದಾಗಿ ಮತ್ತೆ 46 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಹುಡಾ ಅಧ್ಯಕ್ಷ ಶಾಕೀರ್ ಸನದಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ಅವರು, ಈ ಹಿಂದೆ 1988ರಲ್ಲಿ ಎಲ್​ಪಿಎ ನಿಗದಿಯಾಗಿತ್ತು. ಪ್ರಸ್ತುತ ವರ್ಷ 46 ಹಳ್ಳಿಗಳನ್ನು ಸೇರ್ಪಡೆ ಮಾಡಿ ಎಲ್​ಪಿಎ ವ್ಯಾಪ್ತಿ ಹೆಚ್ಚಿಸಲಾಗಿದೆ. ಹುಬ್ಬಳ್ಳಿ ತಾಲೂಕು - 13, ಕಲಘಟಗಿ ತಾಲೂಕು -6, ಧಾರವಾಡ ತಾಲೂಕು -27 ಹಳ್ಳಿಗಳನ್ನು ಹುಡಾ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ಕೈಗೊಳ್ಳಲಾಗಿದೆ. ಈ 46 ಹೊಸ ಹಳ್ಳಿಗಳ ಸೇರ್ಪಡೆಗೆ ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿದೆ ಎಂದರು.

ಗ್ರಾಮ ಪಂಚಾಯತಿಗಳ ಪಿಡಿಒ ಹಾಗೂ ಕಾರ್ಯದರ್ಶಿಗಳ ಸಭೆ ಮಾಡಿ ಅಲ್ಲಿನ ಬೇಡಿಕೆಗಳನ್ನು ಪರಿಗಣಿಸಿ ಯೋಜನೆ ತಯಾರು ಮಾಡಲಾಗುವುದು. ಅಲ್ಲದೇ ಸೇರ್ಪಡೆಯಾಗುವ ಎಲ್ಲಾ ಹಳ್ಳಿಗಳಿಗೂ ರಿಂಗ್ ರೋಡ್ ಕಲ್ಪಿಸಲಾಗುವುದು. ಹಳ್ಳಿಗಳಲ್ಲಿ ರಸ್ತೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದ ಸನದಿ, ಕೆಲವೊಂದು ಮಹಾನಗರ ವ್ಯಾಪ್ತಿಯಲ್ಲಿ ಸರ್ವೆ ನಂಬರ್​ ಗಳು ಪಾಲಿಕೆ‌ ಮತ್ತು ಹುಡಾ ವ್ಯಾಪ್ತಿಗೆ ಹೊಂದಾಣಿಕೆಯಾಗುತ್ತಿಲ್ಲ. ಅಂತಹ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಅವುಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

ನಾನು ಅಧಿಕಾರ ವಹಿಸಿಕೊಂಡ ಮೇಲೆ ಅಕ್ರಮ ಲೇಔಟ್ ತಡೆಗೆ ಪ್ರಯತ್ನ ಮಾಡಿದ್ದೇನೆ. ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಹೊಸ ಅಕ್ರಮ ಲೇಔಟ್​ಗಳು ತಲೆ ಎತ್ತುವುದು ಸ್ವಲ್ಪ ಪ್ರಮಾಣದಲ್ಲಿ ಕಡಮೆಯಾಗಿವೆ. ಈ ನಿಟ್ಟಿನಲ್ಲಿ ಸರ್ಕಾರವು ಕಟ್ಟುನಿಟ್ಟಿನ ಕಾನೂನು ರೂಪಿಸಿದೆ. ಅಲ್ಲದೇ, ಹುಡಾದಿಂದ ಇಂಡಸ್ಟ್ರಿಯಲ್​ಗೂ ನಗರ ಯೋಜನೆ ರೂಪಿಸಲಾಗುವುದು. ಧಾರವಾಡ, ಹುಬ್ಬಳ್ಳಿ, ಕುಂದಗೋಳ ವ್ಯಾಪ್ತಿಯಲ್ಲಿ 500 ಎಕರೆ ಎಲ್‌ಪಿಎ ಅಡಿಯಲ್ಲಿ ಅಭಿವೃದ್ಧಿ ಮಾಡುವ ಚಿಂತನೆ ಇದೆ. ಈಗಾಗಲೇ ಅಮೃತ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಡಿಸೆಂಬರ್ ಕೊನೆಯವರೆಗೆ ಕೊನೆಗೊಳ್ಳಲಿದೆ ಎಂದು ಶಾಕೀರ್ ಸನದಿ ತಿಳಿಸಿದರು.

ಇದನ್ನೂ ಓದಿ: ಗಣನೀಯ ಏರಿಕೆ‌ ಕಂಡ ಹೊರ ರೋಗಿಗಳ ಸಂಖ್ಯೆ; 15 ಪ್ರತ್ಯೇಕ ಒಪಿಡಿ ಕೌಂಟರ್ ತೆರೆದ ಹುಬ್ಬಳ್ಳಿ ಕೆಎಂಸಿಆರ್​​​ಐ

Share This Video


Download

  
Report form
RELATED VIDEOS