ಶಿವಮೊಗ್ಗ ದಸರಾ ಅದ್ಧೂರಿ ಜಂಬೂ ಸವಾರಿ; ಅಂಬು ಛೇದನದೊಂದಿಗೆ ನವರಾತ್ರಿ ಮುಕ್ತಾಯ: ವಿಡಿಯೋ

ETVBHARAT 2025-10-03

Views 2

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವಿಜಯದಶಮಿ ಹಿನ್ನೆಲೆ ಅದ್ಧೂರಿಯಾಗಿ ಜಂಬೂ ಸವಾರಿ ಮೆರವಣಿಗೆ ನಡೆದಿದೆ. ನಗರದ ಶಿವಪ್ಪನಾಯಕ ಅರಮನೆ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪನವರು ನಂದಿ ಧ್ವಜಕ್ಕೆ‌ ಪೂಜೆ ಸಲ್ಲಿಸಿ, ಜಂಬೂ ಸವಾರಿಗೆ ಚಾಲನೆ ನೀಡಿದ್ದರು. ನಂತರ ಕೋಟೆ ಶ್ರೀ ಆಂಜನೇಯ ದೇವಾಲಯದ ಮುಂಭಾಗ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನಡೆಸಲಾಯಿತು. ಅಲ್ಲಿಂದ ಜಂಬೂ ಸವಾರಿ ಮುಂದೆ ಸಾಗಿತು.

ಮೆರವಣಿಗೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಆಯುಕ್ತರಾದ ಮಾಯಣ್ಣ ಗೌಡ, ವನ್ಯಜೀವಿ ವಿಭಾಗದ ಡಿಎಫ್ಒ ಪ್ರಸನ್ನ ಪಟಗಾರ ಅವರು ಪಾಲ್ಗೊಂಡರು. ಮೆರವಣಿಗೆಯಲ್ಲಿ ಅಂಬುಛೇಧನ ಮಾಡುವ ಶಿವಮೊಗ್ಗದ ತಹಶೀಲ್ದಾರ್ ರಾಜೀವ್ ಅವರು ಕೂಡ ಭಾಗಿಯಾಗಿದ್ದರು. ಮಲೆನಾಡ ಜನತೆ ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು. 

ಮೂರು ಆನೆಗಳು ಭಾಗಿ: 650 ಕೆ.ಜಿ ಬೆಳ್ಳಿಯ ಅಂಬಾರಿಯನ್ನು ಸಕ್ರೆಬೈಲಿನ ಸಾಗರ ಆನೆ ಹೊತ್ತು ಸಾಗಿದನು. ಈತನಿಗೆ 2 ಕುಮ್ಕಿ ಆನೆ ಮೆರವಣಿಗೆಯುದ್ದಕ್ಕೂ ಸಾಥ್​ ನೀಡಿದವು. ಈ ಬಾರಿ ಕೂಡ ಈ ಬಾರಿಯೂ ಹೆಣ್ಣಾನೆ ಇಲ್ಲದೇ, ಗಂಡಾನೆಗಳೊಂದಿಗೆ ಶಿವಮೊಗ್ಗ ಜಂಬೂ ಸವಾರಿ ಮೆರವಣಿಗೆ ನಡೆಯಿತು. ಕೋಟೆ ರಸ್ತೆಯಿಂದ ಎಸ್​ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಡಾ.ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ರಸ್ರೆಯ ಮೂಲಕ ಅಲ್ಲಮಪ್ರಭು ಮೈದಾನ ತಲುಪಿತು. 

ಅಂಬು ಛೇದನದ‌ ಮೂಲಕ ನವರಾತ್ರಿ ಮುಕ್ತಾಯ: ಬಳಿಕ ಅಲ್ಲಮಪ್ರಭು ಮೈದಾನದಲ್ಲಿ ನಡೆದ ವಿಜಯ ದಶಮಿ ಅಂಗವಾಗಿ ನಡೆಯುವ ಬನ್ನಿ ಮುಡಿಯುವ ಕಾರ್ಯಕ್ರಮವು ಅತ್ಯಂತ ಸುಂದರವಾಗಿ ನಡೆಯಿತು. ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಶಿವಮೊಗ್ಗ ತಹಶೀಲ್ದಾರ್ ರಾಜೀವ್ ಅವರು ನಡೆಸಿಕೊಟ್ಟರು.‌ ಬನ್ನಿ ಮುಡಿಯುವ ಕಾರ್ಯಕ್ರಮಕ್ಕಾಗಿ ವಿಶೇಷ ವೇದಿಕೆ ನಿರ್ಮಾಣ ಮಾಡಲಾಗಿತ್ತು.

ಈ ವೇಳೆ ಮೊದಲಿಗೆ ಕೋಟೆ ಆಂಜನೇಯ ದೇವಾಲಯದ ಅರ್ಚಕರಾದ ರಾಮಪ್ರಸಾದ್ ಅವರು ಬನ್ನಿ ಮುಡಿಯುವ ಬಾಳೆ ಮರಕ್ಕೆ ಪೂಜೆ ಸಲ್ಲಿಸಿದರು. ನಂತರ ತಹಶೀಲ್ದಾರ್ ರಾಜೀವ್ ಬಾಳೆಮರಕ್ಕೆ ಮೂರು ಸುತ್ತು ಹಾಕಿ, ನಂತರ ತಮ್ಮ ಕೈಯಲ್ಲಿನ ಕತ್ತಿಯಿಂದ ಬಾಳೆಮರವನ್ನು ಕಡಿದರು. ಬಾಳೆಮರ ಕಡಿದ ಮೇಲೆ ಬನ್ನಿ ಮುಡಿಯುವ ಕಾರ್ಯಕ್ರಮ ಮುಕ್ತಾಯವಾಯಿತು. ನಂತರ ಜನತೆ ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಾಶಯ ಕೋರಿಕೊಂಡರು.

ದಶಕಂಠ ರಾವಣನ ದಹಿಸಿ ಸಂಭ್ರಮಿಸಿದ ಜನತೆ: ಬನ್ನಿ ಮುಡಿಯುವ ಕಾರ್ಯಕ್ರಮ ಮುಗಿಯುತ್ತಿದ್ದಂತೆ ರಾವಣನ ದಹನ ಮಾಡಲಾಯಿತು. ರಾವಣ ದೇಹದಲ್ಲಿ ವಿವಿಧ ಪಟಾಕಿಗಳನ್ನು ಇಟ್ಟು ಆತನನ್ನು ಸುಡಲಾಯಿತು. ಈ ಮೂಲಕ ಮನುಷ್ಯ ತಮ್ಮಲ್ಲಿನ ದುಷ್ಟತನವನ್ನು ಸುಟ್ಟು ಹಾಕಬೇಕು ಎಂಬ ಸಂದೇಶ ಸಾರಲಾಗುತ್ತದೆ.

ಇದನ್ನೂ ಓದಿ: ತುಮಕೂರು ದಸರಾ ಮಹೋತ್ಸವ: ವೈಭವಯುತ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದ ಸಚಿವ ಡಾ. ಜಿ. ಪರಮೇಶ್ವರ್​​

Share This Video


Download

  
Report form
RELATED VIDEOS