ಬೆಳಗಾವಿ: ಹಣ ಪಡೆದು ಸಿಎಂ ಮಾಡುವುದು ಬಿಜೆಪಿ ಸಂಸ್ಕೃತಿ. ನಮ್ಮಲ್ಲಿ ಹಾಗೇನಿಲ್ಲ. ನಮ್ಮ ಸರ್ಕಾರ ಸ್ಥಿರವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು.
ಕಾಂಗ್ರೆಸ್ನಲ್ಲಿ 500 ಕೋಟಿ ಕೊಟ್ಟರೆ ಸಿಎಂ ಮಾಡುತ್ತಾರೆ ಎಂಬ ನವಜೋತ್ ಸಿಂಗ್ ಸಿದ್ದು ಪತ್ನಿ ಹೇಳಿಕೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಪ್ರತಿಕ್ರಿಯಿಸಿದ ಅವರು, ಅವರೇನು ಕರ್ನಾಟಕದವರಾ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕ ಸಮಸ್ಯೆಗೆ ಪರಿಹಾರ ನೀಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ. ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಬ್ರೆಕ್ ಫಾಸ್ಟ್ ಮಿಟಿಂಗ್ ಮುಗಿದ ಮೇಲೆ ಸಿಎಂ, ಡಿಸಿಎಂ ಕೊಟ್ಟ ಹೇಳಿಕೆಗಳು ವಿರೋಧಿಗಳಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರು ಇಡ್ಲಿ ತಿಂದ್ರೋ, ನಾಟಿಕೋಳಿ ತಿಂದ್ರೋ ಅದು ಬೇಕಾಗಿಲ್ಲ. ಬಿಜೆಪಿ ಸದನದಲ್ಲಿ ಪ್ರಶ್ನೆಗಳನ್ನು ಕೇಳಲಿ ನಾವು ಉತ್ತರ ಕೊಡಲು ಸಿದ್ದರಿದ್ದೇವೆ. ನರೇಂದ್ರ ಮೋದಿ ಅವರು ರಾಜ್ಯಕ್ಕೆ ಏನೂ ಅನ್ಯಾಯ ಮಾಡಿದ್ದಾರೆ ಅದರ ಬಗ್ಗೆ ಮಾತನಾಡಲಿ ಎಂದು ವಿಧಾನ ಪರಿಷತ್ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್ ತಿರುಗೇಟು ಕೊಟ್ಟರು.
ಸಭಾಪತಿ ಬಸವರಾಜ ಹೊರಟ್ಟಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಸಿಎಂ, ಡಿಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಸವರಾಜ ಹೊರಟ್ಟಿ ಅವರ ಬದಲಾವಣೆ ಇಲ್ಲ. ಈ ಕುರಿತು ಚರ್ಚೆ ಆಗಿಲ್ಲ. ಪರಿಷತ್ನಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಇದೆ ಎಂದರು.
ಪರಿಷತ್ನಲ್ಲಿ ಖಾಲಿ ಸ್ಥಾನ ಭರ್ತಿ, ನಾನು ಸಚಿವನಾಗಬೇಕೋ, ಬೇಡವೋ ಎಂಬುದು ಸೇರಿ ಎಲ್ಲ ವಿಚಾರಗಳಲ್ಲಿ ಪಕ್ಷದ ವರಿಷ್ಠರು, ಹೈಕಮಾಂಡ್ ತೀರ್ಮಾನವೇ ಅಂತಿಮವಾಗುತ್ತದೆ. ಪಕ್ಷದ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ಈಗ ನಮ್ಮ ಮುಂದೆ ಇರೋದು ಸದ್ಯ ಸದನ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಸಲೀಂ ಅಹ್ಮದ್ ಪುನರುಚ್ಚರಿಸಿದರು.
ಇವುಗಳನ್ನೂ ಓದಿ: