'ಬಿಗ್ ಬಾಸ್' ಕಾರ್ಯಕ್ರಮ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದೊಂದು ವ್ಯಕ್ತಿತ್ವಗಳ ಅಥವಾ ಮನುಷ್ಯನ ಮನಸ್ಸಿನ ಅಧ್ಯಯನಕ್ಕೆ ಒಂದೊಳ್ಳೆ ವೇದಿಕೆ. 'ಬಿಗ್ ಬಾಸ್' ನೀಡುವ ಹಲವು ಚಟುವಟಿಕೆಗಳು ಸ್ಪರ್ಧಿಗಳ ಆತ್ಮಾಭಿಮಾನಕ್ಕೆ ಸವಾಲು ಒಡ್ಡುತ್ತವೆ. ಅಹಂಕಾರದ ನಿರಸನಕ್ಕೆ ಕಾರಣವಾಗುತ್ತವೆ. ಜೀವನದಲ್ಲಿ ಎಂದೋ ಮಾಡಿರುವ ತಪ್ಪು, ಸ್ಪರ್ಧಿಗಳಿಗೆ 'ಬಿಗ್ ಬಾಸ್' ಮನೆಯಲ್ಲಿ ಅರಿವಾಗುತ್ತದೆ ಅಂದ್ರೆ ಅದು ಶೋ ಪರಿಕಲ್ಪನೆಗೆ ಸಿಕ್ಕ ಯಶಸ್ಸು.ಸದ್ಯ 'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ನಾವು ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್. 'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ. ತಮ್ಮ ತಪ್ಪಿನ ಅರಿವಾಗಿ, ತಪ್ಪಿತಸ್ತ ಮನೋಭಾವ ಅವರಲ್ಲಿ ಕಾಡುತ್ತಿದೆ. ಮನೆಯಲ್ಲಿ ಹೇಗೆ ಇದ್ದರೂ, ಕುಟುಂಬದವರು ಮಾತ್ರ ಪ್ರಶ್ನೆ ಮಾಡುತ್ತಾರೆ. ಆದ್ರೆ, 'ಬಿಗ್ ಬಾಸ್' ಶೋಗೆ ಬಂದ್ಮೇಲೆ ಹಾಗಾಗಲ್ಲ. ಸ್ಪರ್ಧಿಗಳ ಪ್ರತಿಯೊಂದು ನಡವಳಿಕೆಯನ್ನ ನೂರಾರು ಕ್ಯಾಮರಾಗಳು ಸೆರೆಹಿಡಿಯುತ್ತಿದ್ದರೆ, ಅದನ್ನ ಕೋಟ್ಯಾಂತರ ಜನ ವೀಕ್ಷಿಸುತ್ತಿರುತ್ತಾರೆ.