ದಂಪತಿಗಳಾದ ಮೇಲೆ ತಮಗೊಂದು ಮಗುವಿರಲಿ, ಅವನು/ಅವಳು ನಮ್ಮ ವಂಶ ಬೆಳಗಲಿ ಎಂಬ ಆಸೆ ಇರುವುದು ಸಹಜ. ಆದರೆ ಸಾಕಷ್ಟು ಮಹಿಳೆಯರಲ್ಲಿ ನಾನಾ ಕಾರಣದಿಂದ ಗರ್ಭಧರಿಸಲು ಸಾಧ್ಯವಾಗದೇ ಇರಬಹುದು. ಇದರಿಂದ ದಂಪತಿಗಳಲ್ಲಿ ನಿರಾಸೆ ಉಂಟಾಗುತ್ತದೆ.
ಆದರೆ ನೆನಪಿಡಿ, ಮಕ್ಕಳಾಗದೇ ಇರುವುದಕ್ಕೆ ಮಹಿಳೆ ಮಾತ್ರ ಕಾರಣವಲ್ಲ, ಪುರುಷರಲ್ಲಿನ ಕೆಲವು ದೋಷಗಳಿಂದಾಗಿಯೂ ಕೂಡ ಈ ಸಮಸ್ಯೆ ಉಂಟಾಗುತ್ತದೆ. ಅದರಲ್ಲಿ ಒಂದು, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು. ಇದನ್ನು ಹೆಚ್ಚು ಮಾಡುವ ಸಾಕಷ್ಟು ವೈದ್ಯಕೀಯ ಮಾರ್ಗಗಳಿದ್ದರೂ ಕೂಡ ಕೆಲವೊಮ್ಮೆ ಇದು ಫಲಿಸದೇ ಹೋಗಬಹುದು!
ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಪುರುಷರಲ್ಲಿ ಖಿನ್ನತೆ ಮತ್ತು ಆತಂಕಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತದೆ. ವಾಸ್ತವವಾಗಿ, ವಿಶ್ವದಾದ್ಯಂತದ ದಂಪತಿಗಳ ಮಾನಸಿಕ ಆರೋಗ್ಯದ ಮೇಲೆ ಬಂಜೆತನವು ಒಂದು ಪ್ರಮುಖ ಪರಿಣಾಮವನ್ನು ಬೀರುತ್ತಿರುವುದು ವರದಿಯಾಗಿದೆ.
ನಿಮ್ಮ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯ ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಹಲವಾರು ವೈದ್ಯಕೀಯ ಮತ್ತು ನೈಸರ್ಗಿಕ ಚಿಕಿತ್ಸೆಗಳಿವೆ ಎಂಬುದಂತೂ ಸತ್ಯ. ಇದರಿಂದ ಬಂಜೆತನ ಸಮಸ್ಯೆ ನಿಮ್ಮನ್ನು ಜೀವನ ಪೂರ್ತಿ ಕಾಡಲಾರದು. ಅಧ್ಯಯನದ ಪ್ರಕಾರ ಬಂಜೆತನಕ್ಕೆ ಪರಿಣಾಮಕಾರಿ ನೈಸರ್ಗಿಕ ಪರಿಹಾರವೆಂದರೆ, ಅದು ಯೋಗ!