ವಿಜಯನಗರ (ಬಳ್ಳಾರಿ) : ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಹಿನ್ನೆಲೆಯಲ್ಲಿ ಹಳೇ ಗೇಟ್‌ಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಮಿಕರು ಒಂದೊಂದೇ ಕ್ರಸ್ಟ್ ಗೇಟ್‌ಗಳ ಒಂದೊಂದು ಭಾಗವನ್ನು ತುಂಡರಿಸಿ ಹೊರ ತೆಗೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ಈ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಕಾರ್ಮಿಕರ ಕಾರ್ಯ ಮೈ ಜುಮ್ಮೆನಿಸುವಂತಿದೆ. ಡ್ಯಾಂನಲ್ಲಿ ಸಂಗ್ರಹಗೊಂಡಿರುವ ವಿಶಾಲ ನೀರಿನ ಆಳಕ್ಕೆ ಇಳಿದು, ಹಗ್ಗ ಕಟ್ಟಿಕೊಂಡು ನೇತಾಡಿ ಗೇಟ್ ತೆರವು ಮಾಡುತ್ತಿರುವ ಕಾರ್ಯ ನೋಡುಗರಿಗೆ ರೋಮಾಂಚನ ಉಂಟುಮಾಡುವಂತಿದೆ.
ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಈ ಗೇಟ್ ತೆರವು ಕಾರ್ಯದಲ್ಲಿ ಕಾರ್ಮಿಕರು ಜೀವದ ಹಂಗು ತೊರೆದು ಸಾಹಸಮಯ ಕಾರ್ಯದಲ್ಲಿ ತೊಡಗಿದ್ದಾರೆ. ಅಂದಾಜು 52 ಕೋಟಿ ವೆಚ್ಚದಲ್ಲಿ 33 ಕ್ರೆಸ್ಟ್ಗೇಟ್ಗಳನ್ನು ತೆರವುಗೊಳಿಸಿ, ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ.
ಗುಜರಾತ್ ಮೂಲದ ಗುತ್ತಿಗೆ ಕಂಪನಿ ತಿಂಗಳಿಗೆ 8 ಗೇಟ್ ಅಳವಡಿಸುವ ಗುರಿ ಹೊಂದಿದೆ. ಈ ಯೋಜನೆಯಲ್ಲಿ 5 ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ಏಪ್ರಿಲ್ ತಿಂಗಳಿಗೆ ಎಲ್ಲ ಗೇಟ್ ಅಳವಡಿಕೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಟಿಬಿ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಜಿಗಣಿಯ ಮದ್ಯದ ಬಾಟಲಿ ಲೇಬಲ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ವಿಡಿಯೋ - FIRE