ಕಟಪಾಡಿ (ಉಡುಪಿ): ಮಣಿಪುರ ಗ್ರಾಮದ ಸಿಎಸ್‌ಐ ಚರ್ಚ್ ಬಳಿಯ ಜೇಕಬ್ ಎಂಬುವರ ತೋಟದ ಬಾವಿಯಲ್ಲಿ ಚಿರತೆ ಮರಿಯೊಂದು ಕಂಡುಬಂದಿದೆ. ಅರಣ್ಯ ಇಲಾಖೆ ವತಿಯಿಂದ ಅದನ್ನು ಬಾವಿಯಿಂದ ರಕ್ಷಿಸಿ ಪುನಃ ಸೋಮೇಶ್ವರ ಅಭಯಾರಣ್ಯಕ್ಕೆ ಬಿಡಲಾಯಿತು.
ಬಾವಿಯಲ್ಲಿನ ಪಂಪ್ಸೆಟ್ ಚಾಲೂ ಆಗದಿದ್ದಾಗ ಪರಿಶೀಲಿಸಲಾಗಿದ್ದು, ಈ ವೇಳೆ ಚಿರತೆಯು ಪಂಪ್ಸೆಟ್ ವೈಯರ್ ಅನ್ನು ತುಂಡು ಮಾಡಿರುವುದು ಗಮನಕ್ಕೆ ಬಂದಿದೆ. ಸುಮಾರು 2 ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಇದಾಗಿದ್ದು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು. ಆರ್‌ಎಫ್‌ಒ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಆರ್‌ಎಫ್‌ಒ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ, ಗಸ್ತು ಅರಣ್ಯ ಪಾಲಕರಾದ ದೇವರಾಜ್ ಪಾಣ, ರಾಮಚಂದ್ರ ನಾಯಕ್, ಶ್ರೀನಿವಾಸ ಜೋಗಿ, ಮಂಜುನಾಥ, ಅಖಿಲೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾರಣೆ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಸ್ಥಳೀಯ ಪ್ರಮೋದ್ ಕಟಪಾಡಿ, ಈ ಭಾಗದಲ್ಲಿ ಚಿರತೆ ಹಾವಳಿ ತುಂಬಾ ಇದೆ. ಈ ಹಿಂದೆಯೂ ಇಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈಗ ಬಾವಿಗೆ ಬಿದ್ದಿದ್ದ ಚಿರತೆ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದಿರಬಹುದು. ಇಲ್ಲಿ ಇನ್ನಷ್ಟು ಚಿರತೆ ಇರುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೋನಿನಲ್ಲಿ ಕರು ಇದ್ದರೂ, ತಿನ್ನದೇ ತಾಯಿ ಮಮಕಾರ ತೋರಿದ ಚಿರತೆ! - LEOPARD CAUGHT IN TRAP